ಅಧ್ಯಕ್ಷರ ನುಡಿ
ಆತ್ಮೀಯ ಕಲ್ಪತರು ನಾಡಿನ ಸಹಕಾರಿ ಬಂಧುಗಳೇ,
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ತುಮಕೂರು ಇದರ 71ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ತಮ್ಮೆಲ್ಲರನ್ನು ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಹಾಗೂ ವೈಯಕ್ತಿಕವಾಗಿ ತುಂಬುಹೃದಯದಿಂದ ಸ್ವಾಗತಿಸುತ್ತೇನೆ.
ನಮ್ಮ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ 71 ವರ್ಷಗಳ ಸ್ಮರಣೀಯ ಸೇವೆಯನ್ನು ಪೂರೈಸಿರುವ ಈ ಸಂದರ್ಭದಲ್ಲಿ ಬ್ಯಾಂಕಿನ ಇತಿಹಾಸದ ಸಿಂಹಾವಲೋಕನ ಮಾಡಿದಾಗ, ಅದರ ದೃಢ ಮತ್ತು ನೇರ ಹೆಜ್ಜೆಗಳ ಸಾಧನೆ ಮುಂದಿನ ಸುಭದ್ರತೆಯ ಹಾದಿಗೆ ಕೈಗನ್ನಡಿಯಾಗಿರುತ್ತದೆ.
ಜಿಲ್ಲೆಯ ಅಚ್ಚುಮೆಚ್ಚಿನ ನಮ್ಮ ರೈತಾಪಿಗಳಾದ ತಾವು ಬ್ಯಾಂಕಿನ ಮೇಲೆ ಇರಿಸಿರುವ ಅಪರಿಮಿತ ವಿಶ್ವಾಸ ಹಾಗೂ ತಾವುಗಳು ನೀಡುತ್ತಿರುವ ಸಂಪೂರ್ಣ ಸಹಕಾರದಿಂದ ಬ್ಯಾಂಕು ಯಶಸ್ಸಿನ ಮೆಟ್ಟಿಲೇರುತ್ತಿದ್ದು, ತಾವೆಲ್ಲ ನಮ್ಮ ಬ್ಯಾಂಕನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವ ಮಹದಾಸೆಯಿಂದ ಈ ಸಾಲಿನ ಅಂದರೆ 2024-25ನೇ ಸಾಲಿನ ಬ್ಯಾಂಕಿನ ಪ್ರಗತಿಯನ್ನು ತಮ್ಮೆಲ್ಲರ ಮುಂದೆ ಹಂಚಿಕೊಳ್ಳಲು ಹರ್ಷಿಸುತ್ತೇನೆ.
ವರದಿ ಸಾಲಿನಲ್ಲಿ ನಮ್ಮ ಜಿಲ್ಲೆಯ ಆರ್ಥಿಕ ಸಾಮಥ್ರ್ಯ ಕೃಷಿ /ಕೃಷಿಯೇತರ ಚಟುವಟಿಕೆಗಳು ಉತ್ತಮವಾಗಿದ್ದು, ಬ್ಯಾಂಕಿನ ವ್ಯವಹಾರಕ್ಕೆ ಪೂರಕವಾಗಿರುವ ಜಿಲ್ಲೆಯ ಇತರೆ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆದು ಬ್ಯಾಂಕಿನ ಆರ್ಥಿಕತೆ ಇನ್ನೂ ಸದೃಢವಾಗಿಸಲು ಅವಕಾಶಗಳು ಇರುವುದನ್ನು ಮನಗಂಡು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರ ಹಾಗೂ ಕೆಲವು ಗ್ರಾಮೀಣ ಭಾಗಗಳಲ್ಲಿ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೌಲಭ್ಯದಿಂದ ಹೊರಗುಳಿದಿರುವ ಎಲ್ಲಾ ವರ್ಗದ ಜನರಿಗೆ ನೇರವಾಗಿ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಬಗ್ಗೆ ಬೃಹತ್ ಕ್ರಿಯಾ ಯೋಜನೆ ರೂಪಿಸಿದೆ.
ಬ್ಯಾಂಕು ತುಮಕೂರು ನಗರದ ವಿವಿಧ ಬಡಾವಣೆಯಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 45 ಶಾಖೆಗಳನ್ನು ಹೊಂದಿ ತಮ್ಮೆಲ್ಲರ ಸಹಕಾರದಿಂದ ಉತ್ತಮ ಪ್ರಗತಿ ಸಾಧಿಸಿದೆ. ವರದಿ ಸಾಲಿನಲ್ಲಿಯೂ ಸಹ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ `ಎ` ಶ್ರೇಣಿ ಗಳಿಸಿರುವ ಹೆಮ್ಮೆ ನಮ್ಮದಾಗಿರುತ್ತದೆ ಹಾಗೂ ದಿನಾಂಕ:31-03-2025ರ ಅಂತ್ಯಕ್ಕೆ ರೂ.170063.59ಗಳ ಠೇವಣಿ ಸಂಗ್ರಹಿಸಲಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು ರೂ.249728.64ಲಕ್ಷಗಳಿದ್ದು, ವಿವಿಧ ಯೋಜನೆಯಡಿಯಲ್ಲಿ ರೂ.193174.11ಲಕ್ಷಗಳ ಸಾಲ ವಿತರಣೆ ಮಾಡಲಾಗಿದೆ.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು 2024-25 ನೇ ಸಾಲಿನಲ್ಲಿ ಸಕಾಲಿಕ ಮತ್ತು ಸಮರ್ಪಕ ಸಾಲ ವಿತರಣೆ ವಸೂಲಾತಿ ಹಾಗೂ ಸಮಯೋಚಿತ ಹೂಡಿಕೆಗಳಿಂದ ಒಟ್ಟು ಲಾಭ ರೂ.2513.70ಲಕ್ಷಗಳು ಹಾಗೂ ರೂ.540.89ಲಕ್ಷಗಳ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. 2024-25ನೇ ಸಾಲಿನಲ್ಲಿ ಆದಾಯ ತರದ ಆಸ್ತಿ (NPA ) ಪ್ರಮಾಣವು ಶೇಕಡ.2.90ರಷ್ಟು ಇದ್ದು, ಮುಂಬರುವ ದಿನಗಳಲ್ಲಿ NPA ಪ್ರಮಾಣವನ್ನು ಶೇಕಡ.2ರಷ್ಟು ಸಾಧಿಸಲು ಗುರಿ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಎಲ್ಲಾ ಸಾಧನೆಗಳ ಹಿಂದೆ ತಮ್ಮೆಲ್ಲರ ವಿಶ್ವಾಸ, ಪರಿಶ್ರಮ ಹಾಗೂ ಬೆಂಬಲ ಅಡಗಿದೆ ಎಂದು ತಿಳಿಸುತ್ತಾ ತಮಗೆ ಅಭಿನಂದನೆಗಳನ್ನು ತಿಳಿಸುತ್ತೇನೆ.
ಬ್ಯಾಂಕು ರೈತರಿಗೆ ಶೇಕಡ.0% ಬಡ್ಡಿದರದಲ್ಲಿ ನೀಡಿರುವ ಕೃಷಿ ಸಾಲಕ್ಕೆ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಗಳ ಯೋಜನೆಗಳಾದ ಬಡ್ಡಿ ರಿಯಾಯಿತಿ, ಬಡ್ಡಿ ಮನ್ನಾ ಹಾಗೂ ಇತರೇ ಯೋಜನೆಗಳಡಿಯಲ್ಲಿ ಜಿಲ್ಲೆಯಲ್ಲಿ 2024-25ನೇ ಸಾಲಿಗೆ ಒಟ್ಟು 147872 ಸದಸ್ಯರುಗಳಿಗೆ ಒಟ್ಟು ರೂ.6813..85ಲಕ್ಷಗಳ ಬಿಲ್ಲನ್ನು ಸಲ್ಲಿಸಿದ್ದು, ಸದರಿ ಬಿಲ್ಲಿನಲ್ಲಿ ಸರ್ಕಾರದಿಂದ ರೂ.285.27ಲಕ್ಷಗಳು ಬ್ಯಾಂಕಿಗೆ ಜಮಾ ಬಂದಿದ್ದು, ಉಳಿಕೆ ರೂ.6528.58ಲಕ್ಷಗಳು ಸರ್ಕಾರದಿಂದ ಬಾಕಿ ಬರಬೇಕಾಗಿದ್ದು, ಸರ್ಕಾರದಿಂದ ಪಡೆಯುವ ಬಗ್ಗೆ ಕ್ರಮವಿಟ್ಟು, ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.
ಬ್ಯಾಂಕಿನಿಂದ ಸಾಲ ಪಡೆದ ಒಟ್ಟು 41200 ರೈತರಿಂದ ರೂ.6,18,000/-ಗಳ ಮೊತ್ತವನ್ನು PAIS(Personal Accident Insurance Scheme) ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಮಾಡಿಸಲಾಗಿದ್ದು, ಅವರ ಅವಲಂಬಿತರಿಗೆ ಹೆಚ್ಚಿನ ಭದ್ರತೆ ಒದಗಿಸಿದಂತಾಗಿರುತ್ತದೆ. ಈ ಯೋಜನೆ ಅಡಿಯಲ್ಲಿ ಪ್ರತೀ ರೈತರಿಗೂ ರೂ.50000/-ಗಳ ವಿಮಾ ಮೊತ್ತವನ್ನು ನೀಡಲಾಗಿದ್ದು ಈ ಸಂಬಂದ ಈಗಾಗಲೇ ಒಟ್ಟು 8 ರೈತರಿಂದ ರೂ.400000/-ಗಳ ವಿಮಾ ಮೊತ್ತ ಜಮಾ ಬಂದಿರುತ್ತದೆ.
ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯಂತೆ ಸ್ವಸಹಾಯ ಸಂಘಗಳಿಗೆ ಕಾಲಕಾಲಕ್ಕೆ ಸಾಲವನ್ನು ಬ್ಯಾಂಕಿನಿಂದ ವಿತರಿಸಲಾಗುತ್ತಿರುತ್ತದೆ.
ಕರ್ನಾಟಕ ರಾಜ್ಯ ಸರ್ಕಾರದ ಬಡವರ ಬಂಧು ಯೋಜನೆಯು ಬಡವರ ಪರವಾದ ಕಾರ್ಯಕ್ರಮವಾಗಿದ್ದು, 2024-25ನೇ ಸಾಲಿನಲ್ಲಿ ಈ ಯೋಜನೆಯನ್ನು ಬ್ಯಾಂಕಿನಲ್ಲಿ ಅಳವಡಿಸಿಕೊಳ್ಳಲಾಗಿದೆ.
ದಿನಾಂಕ:31.03.2025ರ ಅಂತ್ಯಕ್ಕೆ ಬ್ಯಾಂಕಿನ ವ್ಯಾಪ್ತಿಯಲ್ಲಿ 254 ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ನಮ್ಮ ಬ್ಯಾಂಕ್ ಗ್ರಾಮೀಣಾಭಿವೃದ್ದಿಗೆ ಹೆಚ್ಚು ಒತ್ತು ನೀಡಲು ಕ್ರಿಯಾ ಯೋಜನೆ ರೂಪಿಸಿದ್ದು, ಜಿಲ್ಲೆಯ 235 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತಾಪಿ ವರ್ಗದ ಆರ್ಥಿಕ ಬೇಡಿಕೆಗಳಿಗೆ ಸಕಾಲಕ್ಕೆ ಸ್ಪಂದಿಸುತ್ತಾ ಬಂದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿದ್ದು ಅವರು ವಾಸಿಸುವ ಸ್ಥಳದಲ್ಲಿ ಆರ್ಥಿಕ ಸೌಲಭ್ಯ ಒದಗಿಸುವಂತೆ ಮಾಡಲು ಈ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನಗದು ಸಾಲದ ರೂಪದಲ್ಲಿ ಚಿನ್ನಾಭರಣ ಸಾಲ, ವಾಹನ ಸಾಲ ದಾಸ್ತಾನು ಸಾಲ, ಗೊಬ್ಬರದ ಸಾಲ, ಪಡಿತರ ಆಹಾರ ಸಾಲ ನೀಡಲು ಬ್ಯಾಂಕಿನಿಂದ ಕಡಿಮೆ ಬಡ್ಡಿದರದಲ್ಲಿ ಮೀರಳೆತ ಸಾಲ ಒದಗಿಸಲಾಗಿದ್ದು, ಈ ಪೈಕಿ ಒಟ್ಟು 32 ಸಂಘಗಳಿಂದ ರೂ.1005.56ಲಕ್ಷಗಳು ಹೊರಬಾಕಿ ಇರುತ್ತದೆ ಹಾಗೂ ರೂ.180.10ಲಕ್ಷ ಸಾಲ ಸುಸ್ತಿ ಇರುತ್ತದೆ. ಇದರಲ್ಲಿ ಮೀರೆಳತ ಸಾಲದ ಬಡ್ಡಿ ಮೊಬಲಗು Capitalise ಮಾಡದೆ ಸರಳ ಬಡ್ಡಿ ವಿಧಿಸಲಾಗುತ್ತಿದೆ.
ಹಾಲಿ ಇರುವ ಶಾಖೆಗಳ ಕಟ್ಟಡಗಳಲ್ಲಿ ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಇತರೆ ವಾಣಿಜ್ಯ ಬ್ಯಾಂಕುಗಳಿಗೆ ಸ್ಪರ್ಧೆಯೊಡ್ಡುವಂತೆ ಕಟ್ಟಡದ ಹೊರ ವಿನ್ಯಾಸ ಮತ್ತು ಒಳವಿನ್ಯಾಸಗಳಲ್ಲಿ ನವೀಕರಿಸಿ ಗ್ರಾಹಕರ ಆಕರ್ಷಣಾ ಕೇಂದ್ರವನ್ನಾಗಿಸಿ ಬ್ಯಾಂಕಿನ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಈಗಾಗಲೇ ಕ್ರಮ ಕೈಗೊಂಡಿರುತ್ತದೆ.
ಹಾಲಿ ಇರುವ ಶಾಖೆಗಳ ಕಟ್ಟಡಗಳಲ್ಲಿ ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಇತರೆ ವಾಣಿಜ್ಯ ಬ್ಯಾಂಕುಗಳಿಗೆ ಸ್ಪರ್ದೆಯೊಡ್ಡುವಂತೆ ಕಟ್ಟಡದ ಹೊರ ವಿನ್ಯಾಸ ಮತ್ತುಯ ಒಳವಿನ್ಯಾಸಗಳನ್ನು ನವೀಕರಿಸಿ ಗ್ರಾಹಕರ ಆಕರ್ಷಣಾ ಕೇಂದ್ರವನ್ನಾಗಿಸಿ ಬ್ಯಾಂಕಿನ ಆರ್ಥಿಕ ಬೆಳವಣಿಗೆಗೆ ಸಹಕಾರವಾಗುವಂತೆ ಈಗಾಗಲೇ ಕ್ರಮ ಕೈಗೊಂಢಿರುತ್ತೇವೆ
ಜಿಲ್ಲೆಯಲ್ಲಿ ಇದುವರೆಗೆ ಸಾಲ ಸೌಲಭ್ಯದಿಂದ ವಂಚಿತರಾದ ರೈತ ಕುಟುಂಬಗಳಿಗೆ ಪ್ರತಿ ವರ್ಷ ಸಾಧ್ಯವಾದಷ್ಟು ಸಾಲ ಸೌಲಭ್ಯದ ವ್ಯಾಪ್ತಿಗೆ ಸೇರಿಸಿಕೊಂಡು ಹಂತ ಹಂತವಾಗಿ ಸಾಲ ನೀಡುವುದು ಬ್ಯಾಂಕಿನ ಗುರಿಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ 1655 ಹೊಸ ರೈತರಿಗೆ ರೂ.686.12.ಲಕ್ಷ ಸಾಲ ವಿತರಿಸಲಾಗಿದೆ. ಈ ಬಗ್ಗೆ ಬ್ಯಾಂಕಿನಿಂದ ಅರ್ಹ ರೈತ ಫಲಾನುಭವಿಗಳಿಗೆ ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ಬೆಳೆ ಸಾಲ ನೀಡಲಾಗುವುದು ಹಾಗೂ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯನ್ನು ಸ್ಥಳೀಯ ದಿನ ಪತ್ರಿಕೆಗಳಲ್ಲಿ ಹಾಗೂ ಇತರೆ ಜಿಲ್ಲೆಯಾದ್ಯಂತ ಪ್ರಸಾರವಾಗುವ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ವಿಶ್ವವಿದ್ಯಾನಿಲಯದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಪದವೀಧರ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಚಿನ್ನದ ಪದಕಗಳನ್ನು ನೀಡಲು ಹಾಗೂ ದತ್ತಿ ಉಪನ್ಯಾಸಗಳನ್ನು ಏರ್ಪಡಿಸುವ ಉದ್ದೇಶದಿಂದ ರೂ.49.00ಲಕ್ಷಗಳಷ್ಟು ಹಣವನ್ನು ವಿಶ್ವವಿದ್ಯಾನಿಲಯದ ಹೆಸರಿನಲ್ಲಿ ಅಪೆಕ್ಸ್ ಬ್ಯಾಂಕಿನಲ್ಲಿ ಠೇವಣಿಸಿ ಅದರಿಂದ ಬರುವ ಆದಾಯದಿಂದ ಮೇಲೆ ತಿಳಿಸಿರುವ ಸವಲತ್ತುಗಳನ್ನು ನಿರಂತರವಾಗಿ ಬ್ಯಾಂಕಿನ ಹೆಸರಿನಲ್ಲಿ ಪ್ರತಿ ವರ್ಷ ನೀಡಲಾಗುತ್ತಿರುವುದನ್ನು ಸಭೆಯ ಗಮನಕ್ಕೆ ತರಲು ಬಯಸುತ್ತೇನೆ. ಈ ಸಂಬಂಧ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಪ್ರತಿ ವಾರ್ಷಿಕ ಘಟಿಕೋತ್ಸವ ಸಂದರ್ಭದಲ್ಲಿ ಚಿನ್ನದ ಪದಕಗಳನ್ನು ವಿತರಿಸಲಾಗುತ್ತಿದೆ.
ಬ್ಯಾಂಕು ಈಗಾಗಲೇ ಎಲ್ಲಾ ಶಾಖೆಗಳನ್ನು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಅಳವಡಿಸಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಈ ಮೂಲಕ ಬ್ಯಾಂಕಿನ ಗ್ರಾಹಕರು ಎಲ್ಲಾ ವಿಧದ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದಾಗಿರುತ್ತದೆ. ಈಗಾಗಲೇ ಸಿ.ಎನ್.ಹಳ್ಳಿ, ತುರುವೇಕೆರೆ, ಕ್ಯಾತ್ಸಂದ್ರ, ಸಿರಾ, ತಿಪಟೂರು, ಶ್ರೀ ಶ್ರೀದೇವಿ ಮೆಡಿಕಲ್ ಕಾಲೇಜು ಆವರಣ, ಮಲ್ಲಸಂದ್ರ, ಕುಣಿಗಲ್, ಅಂತರಸನಹಳ್ಳಿ, ಪಾವಗಡ, ಕೊಡಿಗೇನಹಳ್ಳಿ, ವೈ.ಎನ್.ಹೊಸಕೊಟೆ ಹಾಗೂ ಕೊರಟಗೆರೆ .ಶಾಖೆಗಳಲ್ಲಿ ಎಟಿಎಂ ಮೂಲಕ ಗ್ರಾಹಕರುಗಳಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲಾಗುತ್ತಿರುತ್ತದೆ.
ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ:31-12-2023ಕ್ಕೆ ಸುಸ್ತಿಯಾದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿ ಮನ್ನಾ ಯೋಜನೆಯಡಿಯಲ್ಲಿ ನಮ್ಮ ಬ್ಯಾಂಕಿನಿಂದ ಒಟ್ಟು 111 ಜನ ರೈತ ಸದಸ್ಯರುಗಳಿಗೆ ರೂ.355.26ಲಕ್ಷಗಳ ಬಡ್ಡಿ ಮನ್ನಾ ಸೌಲಭ್ಯ ಪಡೆದಿರುತ್ತಾರೆ.
ನಬಾರ್ಡ್ ನಿರ್ದೇಶನದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೆಸಿಸಿ ಅಲ್ಪಾವಧಿ ಸಾಲ ಪಡೆದಿರುವ ರೈತ ಸದಸ್ಯರುಗಳ ಉಳಿತಾಯ ಖಾತೆ ತೆರೆದು ನೇರವಾಗಿ ಖಾತೆಯಲ್ಲಿ ವ್ಯವಹರಿಸಲು ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ 114699 ರೈತ ಸದಸ್ಯರುಗಳಿಗೆ ರೂಪೇಕಾರ್ಡುಗಳ್ನು ವಿತರಣೆ ಮಾಡಿರುವುದನ್ನು ತಿಳಿಸಲು ಹರ್ಷಿಸುತ್ತೇನೆ.
ಈ ಹಿಂದೆ ಕೃಷಿ ಸಾಲವನ್ನು ಪ್ಯಾಕ್ಸ್‍ಗಳ ಚಾಲ್ತಿ ಖಾತೆಗೆ ಜಮಾ ನೀಡಲಾಗುತ್ತಿದ್ದು, ಸದರಿ ಚಾಲ್ತಿ ಖಾತೆಯಿಂದ ಹಣ ಪಡೆದು ರೈತರಿಗೆ ಸಂಘದ ಹಂತದಲ್ಲಿ ಬಟವಾಡೆ ಮಾಡುವ ಪದ್ದತಿ ಇದ್ದು, ಈ ಪದ್ದತಿಯಲ್ಲಿ ರೈತರಿಗೆ ಸರಿಯಾಗಿ ಹಣ ಬಟವಾಡೆಯಾಗುತ್ತಿಲ್ಲದಿರುವ ಬಗ್ಗೆ ಅನೇಕ ದೂರುಗಳು ಬಂದ ಹಿನ್ನಲೆಯಲ್ಲಿ ರೈತರಿಗೆ ಮಂಜೂರಾದ ಬೆಳೆ ಸಾಲದ ಮೊಬಲಗನ್ನು ಜಿಲ್ಲಾ ಬ್ಯಾಂಕಿನ ಶಾಖೆಗಳಲ್ಲಿರುವ ರೈತರ ಉಳಿತಾಯ ಖಾತಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ನೀಡುವ ಸಹಾಯಧನ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ವಾರದ ಬಟವಾಡೆ ಹಣ ಹಾಗೂ ಬ್ಯಾಂಕಿನಿಂದ ಮಂುಜೂರಾದ ಕೃಷಿ ಸಾಲದ ಹಣ ನೇರವಾಗಿ ಉಳಿತಾಯ ಖಾತೆಗಳಿಗೆ ಜಮಾ ಆಗುತ್ತಿರುತ್ತದೆ. ಈ ಎಲ್ಲಾ ಕಾರಣಗಳಿಂದ ಬ್ಯಾಂಕಿನ ಶಾಖೆಗಳಲ್ಲಿ ರೈತರು/ಗ್ರಾಹಕರು ನೇರವಾಗಿ ಬ್ಯಾಂಕಿಗೆ ಬಂದು ಹಣ ಡ್ರಾ ಮಾಡಿಕೊಳ್ಳುವ ಪದ್ದತಿ ಇರುವುದರಿಂದ ಶಾಖೆಗಳು ಜನದಟ್ಟಣೆಯಿಂದ ಕೂಡಿದ್ದು, ಈ ಜನ ಸಂದಣಿಯನ್ನು ಕಡಿಮೆ ಮಾಡಲು ಈಗಾಗಲೇ 13 ಶಾಖೆಗಳಲ್ಲಿ ಎಟಿಎಂಗಳ ವ್ಯವಸ್ಥೆಯನ್ನೂ ಸಹ ಅಳವಡಿಸಲಾಗಿದ್ದು, ರೈತರಿಗೆ ರುಪೇ ಕಾರ್ಡುಗಳನ್ನು ವಿತರಿಸಲಾಗಿದೆ. ಇದಲ್ಲದೇ ರೈತರು/ಗ್ರಾಹಕರ ತೊಂದರೆಯನ್ನು ನಿವಾರಿಸಲು ಬ್ಯಾಂಕು ಇನ್ನೂ ಹೆಚ್ಚಿನ ಶಾಖೆಗಳನ್ನು ಹೋಬಳಿ ಹಂತದಲ್ಲಿ ತೆರೆಯಲು ಕ್ರಮವಿಡಲಾಗುವುದು.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ತನ್ನ ದುಡಿಯುವ ಬಂಡವಾಳವನ್ನು ಉಪಯೋಗಿಸಿಕೊಂಡು ಜಿಲ್ಲೆಯ ಪ್ಯಾಕ್ಸ್ ಮತ್ತು ರೈತರ ಹಿತ ಕಾಪಾಡಿಕೊಂಡು ಈ ಕೆಳಗಿನ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬ್ಯಾಂಕಿನಲ್ಲಿ ರೈತರು ಪಡೆಯುವ ಚಿನ್ನಾಭರಣ ಸಾಲದ ಬಡ್ಡಿದರದಲ್ಲಿ ಸಾಮಾನ್ಯ ಬಡ್ಡಿದರಕ್ಕಿಂತ ಶೇ.1ರಷ್ಟು ಕಡಿಮೆ ಬಡ್ಡಿದರವನ್ನು ವಿಧಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ PACS COMPUTERIZATION ಯೋಜನೆಯಡಿ ಮೊದಲ ಹಂತದಲ್ಲಿ ಜಿಲ್ಲೆಯ 230 ಪ್ಯಾಕ್ಸ್ಗಳನ್ನು ಕಂಪ್ಯೂಟರೀಕರಣ ಪ್ರಕ್ರಿಯೆಗೆ ಆಯ್ಕೆ ಮಾಡಲಾಗಿದೆ, ಇದರಲ್ಲಿ 140 ಪ್ಯಾಕ್ಸ್ಗಳು GO-LIVE ಆಗಿವೆ ಹಾಗೂ ಉಳಿದ 31 ಪ್ಯಾಕ್ಸ್ಗಳಿಗೆ SYSTEM AUDIT ನಡೆಸಲಾಗಿದೆ. ಮುಂದಿನ ಹಂತದಲ್ಲಿ ಉಳಿದ ಪ್ಯಾಕ್ಸ್ಗಳನ್ನು ಸಹ GO-LIVE ಮತ್ತು SYSTEM AUDIT ಹಿಂದಿನಅನ್ನು ಪೂರ್ಣಗೊಳಿಸಿ ಗ್ರಾಹಕರ ಸೇವೆಗೆ ಸಮರ್ಪಿಸಲಾಗುತ್ತದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಸಂಘಗಳಿಗೆ ಚಿನ್ನಾಭರಣ ಸಾಲ ನೀಡಿ ರ್ಘಿಕಾಭಿವೃದ್ದಿಹೊಂದಲು ಸಂಘಗಳೀಗೆ ಉಚಿತವಾಗಿ ಭದ್ರತಾ ತಿಜೋರಿಯನ್ನು ನೀಡಲಾಗುತ್ತಿರುತ್ತದೆ ಮತು ಹಿಂದಿನ ಸಾಲಿನಲ್ಲಿ ಉದ್ದೇಶಿಸದಂತೆ ತುಮಕೂರು ಜಿಲ್ಲೆಯಾದ್ಯಂತ ಹೊಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಟ್ಟಡಗಳೆಂದು ಗುರುತಿಸುವ ಉದ್ದೇಶದಿಂದ ಕಟ್ಟಡದ ಹೊರಾಂಗಣದ ಗೋಡೆಗೆ ಸಹಕಾರಿ ತತ್ವ ಸೂಚಿಸುವ ಧ್ವಜದ ಬಣ್ಣಗಳ ಲೇಪನವನ್ನು ಪ್ರಸಕ್ತ ಸಾಲಿನಲ್ಲಿ ಅಂದರೆ ದಿ:01.04.2024 ರಿಂದ 31.03.2025ರ ಅವಧಿಯಲ್ಲಿ ಒಟ್ಟು 30 ಪ್ಯಾಕ್ಸ್‍ಗಳಿಗೆ ಬಣ್ಣ ಲೇಪನ ಮಾಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬಾಕಿ ಇರುವ ಇತರೆ ತಾಲ್ಲೂಕುಗಳ ಸಂಘಗಳ ಕಟ್ಟಡದ ಹೊರಾಂಗಣದ ಗೋಡೆಗೆ ಸಹಕಾರಿ ತತ್ವದ ಬಣ್ಣಗಳನ್ನು ಲೇಪಿಸುವ ಗುರಿ ಹೊದಿರುತ್ತೇವೆ ಹಾಗು ರೈತರು ಹಾಗೂ ಗ್ರಾಹಕರುಗಳು ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಒದಗಿಸುವ ದೃಷ್ಟಿಯಿಂದ ಪ್ಯಾಕ್ಸ್‍ಗಳ ಮುಂಭಾಗದಲ್ಲಿ ಷೆಲ್ಟರ್‍ಗಳನ್ನು ಸದರಿ ಸಾಲಿನಲ್ಲಿ ಒಟ್ಟು 14 ಸಂಘಗಳ ಮುಂಭಾಗದಲ್ಲಿ ಅಳವಡಿಸಲಾಗಿದೆ. ಉಳಿದ ತಾಲ್ಲೂಕುಗಳ ಪ್ಯಾಕ್ಸ್‍ಗಳಿಗೆ ಹಂತಹಂತವಾಗಿ ಈ ಕಾರ್ಯವನ್ನು ಸಹ ಮುಂದಿನ ಸಾಲಿನಲ್ಲಿಯೂ ಮುಂದುವರೆಸಲಾಗುವುದು ಎಂದು ತಿಳಿಸಲು ಹರ್ಷಿಸುತ್ತೇನೆ.
ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಬ್ಯಾಂಕು ಅನುಷ್ಠಾನಗೊಳಿಸಿರುತ್ತದೆ ಮತ್ತು ಸರ್ಕಾರದ ಹಂತದಲ್ಲಿ ನಿಗಧಿಪಡಿಸಿರುವ ಅಲ್ಪಾವಧಿ/ಮಧ್ಯಮಾವಧಿ ಕೃಷಿ ಸಾಲದ ಗುರಿಗಳನ್ನು ಸಾಧಿಸಿರುವುದನ್ನು ಸಹ ತಿಳಿಸಲು ಹರ್ಷಿಸುತ್ತೇನೆ.
ಕರ್ನಾಟಕ ಘನ ಸರ್ಕಾರದಿಂದ ಪುನರ್ ಸ್ಥಾಪಿಸಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಡಿಯನ್ನು ಅನುಷ್ಠಾನಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಪ್ಯಾಕ್ಸ್‍ಗಳಲ್ಲಿ ಷೇರು ಸದಸ್ಯತ್ವ ಹೊಂದಿರುವ 93742 ಸದಸ್ಯರುಗಳನ್ನು ಉಚಿತವಾಗಿ ಹಾಗೂ ಇತರೆ ವರ್ಗದ ಷೇರು ಸದಸ್ಯತ್ವ ಹೊಂದಿರುವ 161353 ಸದಸ್ಯರುಗಳನ್ನು ಒಳಗೊಂಡಂತೆ ಒಟ್ಟು 255095 ಸದಸ್ಯರುಗಳನ್ನು ನೊಂದಾಯಿಸಿಕೊಳ್ಳಲಾಗಿದೆ. ಈ ಪೈಕಿ ಸಂಗ್ರಹಿಸಿದ ಯಶಸ್ವಿನಿ ವಿಮಾ ಮೊತ್ತ ರೂ.24691470/-ಗಳನ್ನು ಸರ್ಕಾರದ ಯಶಸ್ವಿನಿ ವಿಮಾ ಟ್ರಸ್ಟ್‍ಗೆ ಬ್ಯಾಂಕಿನ ವತಿಯಿಂದ ಪಾವತಿಸಲಾಗಿದೆ. ಈ ಯೋಜನೆಯಡಿಯಲ್ಲಿ ನೋಂದಾಯಿತ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ 1650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಪ್ರತಿ ಕುಟುಂಬಕ್ಕೆ ರೂ.5.00ಲಕ್ಷಗಳವರೆಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಹಾಗೂ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಲು ತುಮಕೂರು ಜಿಲ್ಲೆಯಾದ್ಯಂತ ನೆಟ್‍ವರ್ಕ್ ಆಸ್ಪತ್ರೆಗಳ ಮಾಹಿತಿಯನ್ನು ನಮ್ಮ ಬ್ಯಾಂಕಿನ ವೆಬ್‍ಸೈಟ್‍ನಲ್ಲಿಯೂ ಲಭ್ಯವಿರುತ್ತದೆ ಎಂಬ ಅಂಶವನ್ನು ಸರ್ವ ಸದಸ್ಯರ ಗಮನಕ್ಕೆ ತರಲು ಹರ್ಷಿಸುತ್ತೇನೆ.
ಬ್ಯಾಂಕಿನ ಪ್ರಗತಿಗೆ ಸಹಕರಿಸಿದ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯಶ್ರೀ ಸಿದ್ಧರಾಮಯ್ಯರವರಿಗೆ ಹಾಗೂ ಉಪ ಮುಖ್ಯ ಮಂತ್ರಿಗಳಾದ ಸನ್ಮಾನ್ಯಶ್ರೀ ಡಿ.ಕೆ.ಶಿವಕುಮಾರವರಿಗೆ, ರಾಜ್ಯದ ಮಾನ್ಯ ಸಚಿವರುಗಳಿಗೆ, ಸಂಸತ್ ಸದಸ್ಯರುಗಳಿಗೆ, ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ, ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ, ಭಾರತೀಯ ರಿಸರ್ವ್ ಬ್ಯಾಂಕ್‍ನವರಿಗೆ, ನಬಾರ್ಡ್ ಸಂಸ್ಥೆಗೆ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿಗೆ, ಸಹಕಾರಿ ಇಲಾಖೆಗೆ, ಜಿಲ್ಲಾ ಸಮಸ್ತ ಸಹಕಾರ ಸಂಘಗಳಿಗೆ, ಸೌಹಾರ್ದ /ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ, ಬ್ಯಾಂಕಿನ ಆಡಳಿತವನ್ನು ನಡೆಸಲು ಸಹಕರಿಸಿದ ನಮ್ಮ ಬ್ಯಾಂಕಿನ ಎಲ್ಲಾ ಮಾನ್ಯ ನಿರ್ದೇಶಕರುಗಳಿಗೆ, ನಮ್ಮ ಬ್ಯಾಂಕಿನ 2024-25ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧನೆ ನಡೆಸಿದ ಚಾರ್ಟೆಡ್ ಅಕೌಂಟೆಂಟ್‍ರವರಾದ ರಾಮರಾಜ್ ಮತು ಕಂಪನಿ ಬೆಂಗಳೂರು
ಏಕಕಾಲೀನ ಲೆಕ್ಕಪರಿಶೋಧಕರಾದ ಅನಿಲ್ ಕುಮಾರ್ ಎಸ್ ಮತ್ತು ಕಂಪನಿರವರಿಗೆ, ದಕ್ಷ ಹಾಗೂ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿರುವ ಬ್ಯಾಂಕಿನ ಸಿಬ್ಬಂದಿ ವರ್ಗಕ್ಕೆ, ನಮ್ಮೆಲ್ಲರ ಗೌರವಾನ್ವಿತ ಗ್ರಾಹಕರಿಗೆ ಹಾಗೂ ಬ್ಯಾಂಕಿನ ಪ್ರಗತಿಗೆ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮದವರು ನೀಡುತ್ತಿರುವ ಬೆಂಬಲ ಹಾಗೂ ತೋರುತ್ತಿರುವ ಸದ್ಭಾವನೆಗಳಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಮತ್ತು ವೈಯಕ್ತಿಕವಾಗಿ ನಮ್ಮ ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಲು ಸಹಕಾರವನ್ನು ನೀಡಲು ಅಪೇಕ್ಷಿಸಿ ಎಲ್ಲರಿಗೂ ಹೃತ್ಪೂರ್ವಕವಾಗಿ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ಸಹಕಾರಿ ಶುಭಾಶಯಗಳೊಂದಿಗೆ,
ತಮ್ಮ ವಿಶ್ವಾಸಿ
(ಕೆ.ಎನ್.ರಾಜಣ್ಣ)
ಅಧ್ಯಕ್ಷರು ತುಮಕೂರು ಡಿಸಿಸಿ ಬ್ಯಾಂಕ್ ನಿಯಮಿತ., ತುಮಕೂರು
ಹಾಗೂ ಸಹಕಾರ ಸಚಿವರು, ಕರ್ನಾಟಕ ಸರ್ಕಾರ
“ಜೈ ಹಿಂದ್ ಜೈ ಸಹಕಾರ”
